ಪ್ರಪಂಚದ ಶಕ್ತಿ ದೇವತೆ ಮಹಿಷಮರ್ದಿನೀ ಅಥವಾ ದುರ್ಗಾ ಹೀಗೆ ಅನೇಕ ಅವತಾರಗಳಲ್ಲಿ ಕಾಣ ಸಿಗುತ್ತಾಳೆ. ಹಿಂದೂ ಧರ್ಮದ ಅತ್ಯಂತ ಶಕ್ತಿಯುತ ದೇವತೆಯಾಗಿ ದುರ್ಗಾ ದೇವಿಯನ್ನು ಕಾಣುತ್ತೇವೆ. ಪರಮೇಶ್ವರನ ಪತ್ನಿಯಾದ ಪಾರ್ವತಿ ದೇವಿಯೇ ದುರ್ಗಾ. ಈಕೆಯನ್ನು ಶಕ್ತಿಯ ಅವತಾರವೆಂದೇ ಪರಿಗಣಿಸಲಾಗುತ್ತದೆ. ಮಹಿಷಾಸುರನು ದೇವತೆಗಳನ್ನು ದೇವಲೋಕದಿದಂದ ಹೊರ ಹಾಕಿದಾಗ ಅವರು ದುರ್ಗಾ ಮಾತೆಯ ಮೊರೆ ಹೋಗುತ್ತಾರೆ. ಹಾಗು ಆ ಸಮಯದಲ್ಲಿ ಎಲ್ಲಾ ದೇವತೆಗಳು ಒಂದೊಂದು ಆಯುಧವನ್ನು ಈಕೆಗೆ ನೀಡುತ್ತಾರೆ. ಮಹಿಷಾಸುರನನ್ನು ಸಂಹರಿಸಿದ್ದಕ್ಕಾಗಿ ಆಕೆಯನ್ನು ಶ್ರೀ ಮಹಿಷಮರ್ದಿನೀ ಎಂದು ಕರೆಯುತ್ತಾರೆ. ಶ್ರೀ ಮಹಿಷಮರ್ದಿನೀ ಮಹಿಷಾಸುರ ಸಂಹಾರವಲ್ಲದೇ ನ್ಯಾಯ ನೀತಿ ಧರ್ಮದ ರಕ್ಷಣೆ ಮಾಡಿ ದುರಾಸೆ- ದುಮಾರ್ಗ, ಕೋಪ- ಆಧರ್ಮ ಇವುಗಳ ನಿವಾರಣೆಗೆ ಕಾರಣಗಳೆಂದು ಭಾವಿಸಲಾಗುತ್ತದೆ. ಶ್ರೀ ಮಹಿಷಮರ್ದಿನೀಯ ಉಪಾಸನೆ ಸುಮಾರು ಏಳು ಸಾವಿರ ವರ್ಷಗಳ ಹಿಂದಿನಿಂದಲೂ ನಡೆಯುತ್ತಾ ಬಂದಿದೆ. ಭಾರತದ ಪಶ್ಚಿಮ ಕರಾವಳಿಯ ಉಡುಪಿ ಜಿಲ್ಲೆಯು ಶ್ರೀ ಕೃಷ್ಣನ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಈ ಪಟ್ಟಣದಲ್ಲಿ ದುರ್ಗಾ ದೇವಿಗೆ ಮೀಸಲಾದ ನಾಲ್ಕು ದೇವಸ್ಥಾನಗಳಿವೆ. ಅದರಲ್ಲಿ ಶ್ರೀ ಮಹಿಷಮರ್ದಿನೀ ದೇವಸ್ಥಾನ ಕಡಿಯಾಳಿ ಈ ದೇವಳವು ಉಡುಪಿ ಪಟ್ಟಣದ ಪಶ್ಚಿಮ ಭಾಗಕ್ಕೆ ಎರಡು ಮೈಲಿ ದೂರದಲ್ಲಿದೆ.